Sunday, 26 October 2014

ಕನಾಸೆ

ಕಂಗಳಲಿ ತುಂಬಿ ಕಡಲಾದ ಕನಸುಗಳ
ಹಂಚಲು ಹಿಡಿ ಬೊಗಸೆಯೇ ಸಾಕೆ ?
ಕಟ್ಟಿ ಕೆತ್ತಿದ ಕನಸುಗಳು
 ಕಳೆದು ಹೋದೀತು ಜೋಕೆ !!!

 ಆಗಸದಂತೆ ಹರಡಿದ ಆಸೆಗಳ
 ಅರಿಯಲು ತಿಳಿ ಮನವೊಂದೇ  ಸಾಕೆ ?
 ಅರಿವಿಲ್ಲದೆ ಅರಳಿದ ಆಮಿಷಗಳು
 ವಿಷವಾದೀತು ಜೋಕೆ !!!!

                         

                                   -- ಪ್ರಭಾತ್

Friday, 28 December 2012

ಆಸೆ ..

ಗೆಳತಿ,


ನಿನ್ನ ನಗೆಯಿಂದ ಹರಡಿದ

ಬೆಳದಿಂಗಳ ಕಡಲಲಿ

ಮಿಂದು ಈಸುವ ಆಸೆ ...


ನಿನ್ನ ಕಿರುನೋಟದ ಮಿಂಚಿನಲಿ

ಮಿನುಗುವ ಅಂಗಳದಲಿ

ಮನೆಮಾಡುವ ಮಹಾದಾಸೆ ...


ನಿನ್ನ ಸನಿಹದಲೆ ಕುಳಿತು

ನಿನ್ನ ಮಾತುಗಳ ಸದಾ ಸವಿಯುವ

ಸಖನಾಗುವ ಸಿಹಿ ಆಸೆ...


ನಿನ್ನ ಉಸಿರಿನ ತಂಪಾಗಿ

ಅಪ್ಪುಗೆಯ ಬಿಸಿಯಾಗಿ

ನಿನ್ನ ಬದುಕಾಗಿರಲು ಬಲು ಆಸೆ

           
                                  -- ಪ್ರಭಾತ್Sunday, 22 February 2009

ರಂಗಜ್ಜನ ಬಾಳ ಪುರಾಣ
-----------------------
ಬರಗಾಲದ ನೆಲವನ್ನೇ ನೆಪವಾಗಿಸಿ
ಸುಣ್ಣ-ಬಣ್ಣ ಕಾಣದ ಶಿಥಿಲ ಗೋಡೆಗಳ ಮನೆ
ಅದರೊಳಗೆ ಕಷ್ಟಗಳ ಕಡಲ ಹೊಡೆತಕ್ಕೆ ಮುರಿದು ಮೂಲೆಸೇರಿದ ಎರಡು ಮನ

ಬರುವ ಭರಣಿ ಮಳೆಗೋ , ಬೀಸುವ ಬಿರುಗಾಳಿಗೋ
ಕಿತ್ತು ಹೋಗುವ ಸೂರು
ಜೊತೆಗೆ ನಿಲ್ಲದ ಕೃತಘ್ನ ಊರು

ಮುಂಜಾನೆಯಿಂದಲೇ ಮುಗಿಬೀಳುವ ಸಾಲವಸೂಲಿಗಾರರ ಸಾಲು
ಸುಕ್ಕುಗಟ್ಟಿದ ಹಣೆಯ ಮೇಲೆ ಇರುವ ದುರಾದೃಷ್ಟ ಗೆರೆಗಳು ಎರಡು-ಮೂರು
ತಂದೋರಗಿದೆ ಮನಗಳ ಮಧ್ಯೆ ಗಡಿರೇಖೆಗಳ ಸಹಸ್ರಾರು


ದೀಪದ ಎಣ್ಣೆಗೋ , ಹೆಂಡತಿಯ ದವಾಯಿಗೋ
ಕಿಸೆಯಲ್ಲಾ ಹುಡುಕಾಡಿದರು ಹುಟ್ಟದ ಎರಡು ರೂಪಾಯಿ
ಸಂಜೆ ನೋವುಗಳ ಒಡನೆ ನುಂಗುವ ಅವರಿವರ ಕೃಪೆಯ ಸಾರಾಯಿ

ಅವಮಾನಗಳೇ ಆಭರಣಗಳಾಗಿರುವ ಅನರ್ಥ ಜೀವನ
ಆಹ್ವಾನ್ವಿತ್ತರು ಬಂದಪ್ಪದ ಅರೆಕಾಲಿಕ ಮರಣ
ಇದೇ ಆರ್ಥಿಕತೆ ಅನಾವಸ್ಥೆಯಲಿ ಅರ್ಥ ಕಳೆದು ಕೊಂಡ ರಂಗಜ್ಜನ ಬಾಳ ಪುರಾಣ


                                   -- ಪ್ರಭಾತ್

Sunday, 11 January 2009

 
ಪ್ರೀತಿ 
---------

ಮನಕೆ ಅಂಟಿದ ಪ್ರೀತಿ ಹುಚ್ಚು 
ಉರಿದು ಕೊಲ್ಲುವ ಕಾಡ್ಗಿಚ್ಚು

ಒಲವು ನಿನ್ನೊಡನೆಯ ಅವಿಧೇಯ ವಿಪಕ್ಷಿ 
ಭಾವಗಳೆ ಬದುಕಾಗಿರುವದು ಇದಕೇ ಸಾಕ್ಷಿ 


ಕ್ಷಣಿಕ ಬಾಳಿನಲಿ ಹೋರಾಟ ಸಹಜ
ಅರಿವಿನ ಅರಿಯಿಂದ ಸೋಲದಿರು ಮನುಜ 

ನಿನ್ನ ಸೋಲಿನ ಜೊತೆ ಕಲಿಕೆ ಇರಲಿ
ಬಂಗಾರ ಬದುಕಿನ ಬಯಕೆ ಜೀವಂತವಾಗಿರಲಿ 

                              -- ಪ್ರಭಾತ್ 

Friday, 9 January 2009

ಚುಟುಕ
-------------

ಜಗದ ಚಿಂತೆಯೂ ಅಳಿವುದು ಚಿತೆಯ ಭಸ್ಮದ ಒಡನೇ,

ದುಷ್ಟವೋ ಪಾಪವೋ ಕರ್ಮ ಅಳಿವುದು ಕಳೆಬರದ ಒಡನೇ, 

ಜೀವನದ ಮರ್ಮ ಅಡಗಿಹುದು ಗಡಿಯಾರದ ಮುಳ್ಳುಗಳನಡುವೆ 

                                                              --ಪ್ರಭಾತ್

Thursday, 20 November 2008


ಬಾಳೆಮರ - ಬಾಳ ಸಾರ


ಹೊಲದ ಮಧ್ಯೆದಿ ಬೆಳೆದು ನಿಂತಿತ್ತೊಂದು 
ಬಾಳೆಮರ .... 

ದರ್ಪವನ್ನೆಲ್ಲ ವರ್ಣವಾಗಿಸಿ ಬೀಗಿ ನಿಂತಿತ್ತು 
ಅದರ ಎಲೆ ... 

ಎತ್ತರದ ಆಗಸದ ನೀಲಿಗೆ - ಹಸಿರ ಸಿರಿವಂತಿಕೆಯ 
ಮೆರೆಯುತ, ಅಹಮ್ಕಾರದಿ ಆರ್ಭಟಿಸಿತ್ತು, ಅದು ನೋಡ ...
 
ಬದುಕ ನೀತಿಯ ಕಲಿತು , ಬರುವ ನಾಳೆಯ ಅರಿತು 
ಅದೇ ಎಲೆಯ ಬುಡಕೆ ಒರಗಿತ್ತು , ಒಂದು ಬಾಳೆ ಗೊನೆ... 

ಭಾರವನು ಹೊತ್ತು, ಬೆಳೆಸಿ ನಿಲ್ಲಿಸಿದ ಇಳೆಗೆ;ವಿನಯದಿ ನಮಿಸಿ, 
ಹೊದಿಕೆಯೊಳಹೊಕ್ಕಿ ಅಡಗಿತ್ತು  ಅದು ಕಾಣ ...
 
ದಿನವೂ ಕಳೆಯಿತು , ಋತುವೂ ಹರೆಯಿತು
ಮುದುರಿ ಒಣಗಿತು ಎಲೆಯು ....
 
ಎಲೆಯು ಅಳಿಯಿತು ; ಪರಿತಪಿಸಿ, ಕಳೆದು ಕೊಂಡ ಬಣ್ಣಕೆ, 
ಕಲಿಯಲಾರದ ಪಾಠಕೆ .... 

                                     --- ಪ್ರಭಾತ್

Sunday, 14 September 2008

ಕನಸಿನ ಕನ್ಯೆ
ಮನ ಕಲಕುವ
ನಿನ್ನಯ ಮಾದಕ ನೋಟಕೆ
ನಲಿಯುತ ನರ್ತಿಸೋ ನವಿಲಾದೆ...

ಕಣ್ಣನು ಸೆಳೆಯುವ
ನಿನ್ನಯ ,ಶ್ವೇತ ವರ್ಣಕೆ ಸಾಟಿ ಯಾರೆಂದು
ಹುಡುಕುತ ಹುಡುಕುತ ಸುಸ್ತಾದೆ..

ಬಳುಕುತ ಬೀಗುವ ,
ನಿನ್ನಯ ತನುವಿನ ಸ್ರುಷ್ಠಿಯ
ಬ್ರಹ್ಮನ ಹೊಗಳುತ ಹಾಡುತ ನನ್ನನೇ ನಾನೇ ಮರೆತ್ ಹೋದೆ..

ಕನಸನು ಕಾಣುತ,
ಮೈಮನ ಮರೆಯುತ ,
ನಿನ್ನನು ನೆನಯುತ ,
ಎನ್ನರಿವಿಲ್ಲದೆ ಕವಿಯಾದೆ....
ಒಳಿತು
ತುಂಬು ಕೊಳದಿ ಬಿರಿದ
ತಾವರೆಯು ,ಇಬ್ಬನಿಯ ಒಂದು ಹನಿಗೆ
ನಗೆ ಬೀರಿ ಅಭಿನಂದಿಸುವುದಿಲ್ಲವೇ ?
ಹುಟ್ಟಿ, ಬೆಳೆದ ಕೊಳದ, ಆ ಸಹಸ್ರ ಕೋಟಿಹನಿಗಳಿಗೆ
ಇಲ್ಲದ ಆ ಸನ್ಮಾನ ಕರಗಿ ಹೋಗುವ ಈ ಇಬ್ಬನಿಯ ಹನಿಗೆ ಏಕೆ ?
ಸೂಕ್ಷ್ಮವೋ, ಕ್ಷಣಿಕವೊ
ದೊರೆತ ಅಮೂಲ್ಯ ವಸ್ತುಗಳಿಗೆ ಅಭಿನಂದಿಸುವುದು ಒಳಿತು ..


ಬೆಳೆಗುವ ರವಿಯನೇ ಸರಿಸಿ,
ಅಗಸವ ಅಪ್ಪಿ;
ಧರೆಯ ವಿರಹವ ಕಂಡು ಕುಣಿಯುವ
ಕಾರ್ಮೋಡಕೆ;
ಎಂದೋ, ಎಲ್ಲೋ ಸುರುಸಿದ ನಾಲ್ಕುಹನಿಗಾಗಿ
ಹದವಾದ ಅವನಿ ಕ್ಷಮಿಸುವಿದು ಏಕೆ ?
ಕಷ್ಟವೋ, ನಷ್ಟವೋ
ಉಪಕಾರವ ನೆನೆದು ಕೃತಜ್ಞಿಸುವುದು ಅತಿ ಒಳಿತು...

ಪಕ್ಷ ಬದಲಿಸುವ , ಆಕಾರ ಅಸ್ಥಿರ,
ಚಂಚಲ ಚಂದಿರನ ಕಂಡು ಚಕೋರಿ
ಎಂದಾದರು ಮುನಿಸೀತೆ ?
ಗೆರೆ ಬಿಚ್ಚಿ ಶಶಿಯ ಬೆಳದಿಂಗಳನೆ ಅಪ್ಪಿ
ಪ್ರೀತಿಸುವ ಪರಿ.
ಸಫಲವೋ , ವಿಫಲವೋ
ಪರಿಸ್ಥಿತಿಯ ಅರಿತು ಒಡಂಬಡಿಸುವುದು ಅತಿ ಒಳಿತು..

ಹರಡಿ ನಿಂತ ಹೆಮ್ಮರದ
ಸಕಲ ಭಾರವನು ಹೊತ್ತ ಮುದಿ ಬೇರು,
ಉದುರಿದ ಒಣ ಎಲೆಗೆ ಸಾಂತ್ವನಿಸುವುದಿಲ್ಲವೇ ?
ಎಲ್ಲವನು ಮರೆತು
ಯೋಚಿಸದೇ, ಹಸಿರಾಗಿದ್ದಾಗ ಮಾಡಿದ ಎಲೆಯ ಗೇಲಿಯನು ಕುರಿತು.
ಸೌಖ್ಯವೋ , ದುಗುಡವೋ
ಸೋತ ಸಂಗಾತಿಗೆ ಸಾಂತ್ವನಿಸುವುದು ಅತಿ ಒಳಿತು..
ಸಂತೆ ಸಂಸಾರ

ವೈಚಿತ್ರ ವಿನೋದದ ವಿಸ್ಮಯ
ಪಯಣವೇ ಈ
ಸ್ಪರ್ಧಾಬರಿತ ಜೀವನ ;

ವಿಧಿಯ ವಿಕಲ್ಪದೊಡೆ
ಭಾವ ಮಂಥನ ಬಂಧನ;

ಮೋಸ , ತಾಪವೋ,
ಸತ್ಯ ನಿತ್ಯವೋ,

ಪಾಪಿಯೆಲ್ಲದ, ಪುಣ್ಯವಿಲ್ಲದ ಜನರ
ಜಾತ್ರೇಲಿ ಅರಿಯಲಾರೆವು,
"ಯಾಕೀ ಮೋಸದ ಜೀವನ !!!!
'ಪ್ರೀತಿ' ಎಂಬ ಮಾಯೆಯೇ ಕಾರಣವೇನು ???
ಕಳೆದು ಹೋಗಿದೆ ಎನ್ನ ಮನವು...
ಜಡವಾಗಿದೆ ಎನ್ನ ತನವು...

ಕನ್ಗಳಲಿ ಚಿಗಿರುಹುದು ಸುಂದರ ನಾಳೆಗಳ ಕನಸು...
ಬರುವ ಬದುಕಲಿ ನಿನ್ನ ನೆರಳಾಗುವ ಮನಸು...

ಹೃದಯ ಮಿಡಿತದಿ ಒಂದೇ ತುಡಿತ...
ಬೆಸೆಯಲು ನಿನ್ನ ಹೆಸರ ನನ್ನೀ ಉಸಿರಿನ ಸಹಿತ...

ನಿನ್ನೆ ಮೊನ್ನೆಯ ನಮ್ಮೀ ಸ್ನೇಹ ..
ತಂದೀತೇ ನನ್ನ ಇಂತಹ ಸನಿಹ...

ಧ್ರುವಾಂತರದಲಿದ್ದ ನಾನು - ನೀನು ...
ಬೆರೆಯಲು 'ಪ್ರೀತಿ' ಎಂಬ ಮಾಯೆಯೇ ಕಾರಣವೇನು ???
ಬಯಕೆ
ಎನ್ನ ಮನದ ಮಂಟಪದಲಿ
ಸಿಂಗರೀಸಿದೆ ಸಹಸ್ರ ಸವಿ ಕನಸುಗಳು,
ನಿನ್ನ ಕಂಡಾಕ್ಷಣ ಉದ್ಭವಿಸಿದ ಭಾವಗಳು,
ನನ್ನನಪ್ಪಿ ಅವರಿಸಿದೆ ಬೃಹದಾಗಿ ಬೆಳೆದು...
ಧನಸ್ಸಿನಿಂದ ಚಿಮ್ಮಿದ ಅಮ್ಬುವಿಗೆ
ನಿನ್ನ ಅನುಪಸ್ಥಿತಿಯಲ್ಲಿ ಗುರಿಯೂ ಮರೆತು ಹೋದಂತೆ ,
ಮನಸ್ಸಿಗೆ ತಮಸ್ಸು ಒರಗಿ
ಖುಷಿಯೂ ಮಡಿದಂತೆ , ನಲಿವು ಮರೆತು ಹೋದಂತೆ...
ಕ್ರಿಷ್ಣಪಥದಲಿ ಕಳೆದು ಹೋಗಿಹುದು ಬದುಕು,
ಕಣ್ಣರೆಪ್ಪೆಗಳಲೇ ನೀ ಆಡುವ ಮಾತುಗಳಿಗೆ
ಬಯಕೆಯ ಹೊಸ್ತಿಲಲೆ ಆಲಿಸುತಿದೆ ಸೋತ ಮನವು

ಮೌನವನವರಿಸಿದ ಮನಸ್ವಿಯೇ ,
ಮನಸಿಗೇಕೆ ಈ ಮೋಸದ ಮುಖವಾಡ ?
ಮಧುರ ಮಾತುಗಳನಾಡಿ ,
ಮೇಘವರ್ಷವ ತಾರೆ ಎನ್ನ ಮಾನಸ ಸರೋವರಕೆ..
ತುಂಟ ನಗೆಯನು ಬೀರಿ,
ಚೈತನ್ಯವ ತಾರೆ ಎನ್ನ ಹಿತ ಚಿತ್ತಕೆ..
ಇದೇ ಎನ್ನ ಮನದಾಳದ ಬಯಕೆ !!!
ನೀನೊಂದು ಪಕ್ಷಿ

ಪುಕ್ಕ ಚಿಗುರದ ಪಕ್ಷಿಗೆ
ಇತರರಂತೆ ಹಾರುವುದೇ ಕನಸು ,
ನಂತರದ ದಿನಗಳಲಿ
ಬಲಿತ ರೆಕ್ಕೆಯ ಹರಡಿ
ಹಾರುವುದೇ ಬದುಕು


ನಿತ್ಯ ನಿರಂತರ ದುಡಿಮೆಯಲಿ
ದಣಿದೀತು ಭುಜವು ,
ಜೀವನದ ಪಯಣದಲಿ
ಕರಗೀತು ಮನದಾಸೆ .

ನೆನೆದು ನಿನ್ನಯ ಕನಸು
ದಿನವೂ ದಿಗಂತದ ದಿಕ್ಕುಗಳಾಚೆ
ನವೋತ್ಸಹದ ಗೆರೆ ಬಿಚ್ಚಿ
ಹಾರುತ ನಲಿಯುವುದೇ ಸೊಗಸು
ಹುಡುಕಾಟ
ಅಂಧಕಾರದ ಅಂಧತ್ವದಲಿ,
ಆರಿಸಲು ಹೋದೆ ಪ್ರೀತಿ, ಪ್ರೇಮ ,ಸ್ನೇಹತ್ವವನು,
ಫುಟ್ಪಾತಿನ ಸಾಮಾನಿನಂತೆ;
ವಿಶ್ವ ವಿಷಮ್ಯದ ವಿಚಿತ್ರ ಚಿತ್ರಣದಲಿ
ಸಿಕ್ಕಿದ್ದು ಒಂದು , ಸಿಗದಿದ್ದು ಒಂದು,
ಉಳಿದಿದ್ದು ಕೇವಲ ಅನುಭವ ವಚನಗಳು ಮಾತ್ರ...
ಓ ,ಪ್ರಿಯೇ
ಮರೆಯಲಾರದೇ ನಿನ್ನ
ನೊಂದ ಆ ನಿರ್ಜೀವ ಕ್ಷಣಗಳ ಬಡಿತ,
ಮನದಾಳದಿ ಮಿಂದ
ಆ ಬಲಿತ ಭಾವನೆಗಳ ಮಿಡಿತ,
ತಾಳಲಾರೇನು ನಾನುನನ್ನಾವರಿಸಿದ
ಈ ನಿನ್ನೊಲವಿನ ತುಡಿತ .


ಕಣ್ಣೋಟ
ಹುಡುಕುತಿಹುದುನಿನ್ನ ಇರುವಿಕೆಯನು,
ಮನದಾಸೆ ಕಾಯುತಿಹುದು
ನಿನ್ನ ಮರೆಯಾದ ಮಂದಹಾಸವನು,
ಈ ಮೌನ ಆರೆಸುತಿಹುದು
ನಿನ್ನ ಮಧುರ ಮಾತನು.


ಓ ಪ್ರಿಯೇ,
ಸಾಕುಮಾಡು ನಿನ್ನ ಈ ಕಣ್ಣಾಮುಚ್ಚಾಲೆ !!!
ಹಟದ ಅಶ್ವವವೇರಿ
ಗೆದ್ದವರು ಯಾರೇ ?
ವಿರಹ ಕಿಚ್ಚನು ಅಪ್ಪಿ
ಉಳಿದವರು ಯಾರೇ ?

ಮಿಡಿಯುವುದು ಅರುಣರಾಗ
ನಿನ್ನ ಮೌನ ಮುರಿದರೆ,
ಮೂಡುವುದು ಅನುರಾಗ
ಮನಸ್ವಿ ನೀನನ್ನ ಅರಿತರೆ.


ಸ್ನೇಹದಾರೈಕೆ

ಸ್ನೆಹಸುಗಂಧದ ಸುಖಮಯ ಸವಿಯಲಿ ,
ರುದಿರವೇತನೆಯ ಹೃದಯ ಕ್ಷಣಗಳು
ಕೊಟ್ಟಾವೇ ಪ್ರೀತಿಸುಖವನ್ನು;
ಭಾರದ ಹೃದಯ ಬಾರದ ಕಂಬನಿಯಲಿ
ಕೊಡುವುದು ಏನನ್ನು?
ಬಾನ ಆಗಸದ ಭಾನುವಿಗೆ
ಬಾಡಿದ ಮರವು ಕೊಟ್ಟಿತೇ ನೆರಳನ್ನು ???

ದಿನದಿನದ ಕಣಕಣಗಳ ಕ್ಷಣಕ್ಷಣಗಲಿ
ಮೂಡಾವೂ ನಿನ್ನ ಸ್ನೇಹ ,
ಮರುಭೂಮಿಯ ಮರೀಚಿಕೆಯಂತೆ
ಮುದುಡಿದ ಮನಕೆ ,
ಸಾಗರಾಳದ ಮಾಣಿಕ್ಯದಂತೆ;

ಪುಕ್ಕಕ್ಕಿತ್ತ ಕನಸುಗಳ ಕಾಮನಬಿಲ್ಲಿಗೆ
ಬಣ್ಣಗಳಾಗವೇಬದುಕಿನ ಕ್ಷಣಗಳು,
ನೀಲಿ ಆಗಸದ ಚಂದಿರನೇತಕೇ
ಸೃಷ್ಟಿಸಲಾರನುಹೊಸ ಚರಿತ್ರೆಯನು?????
ಧೂಳಿನ ಧರತಿಯು ದಣಿಯದು ಏತಕೆ
ಭಾವನೆಗಳ ಬಂಧನದಲಿ ???

ನಿನ್ನ ಬದುಕಿನ ಬರುವ ಕ್ಷಣಗಳು
ಬರಲಿ ಬಂಗಾರ ಬಣ್ಣದಲಿ,
ನಿನ್ನ ಬಾಳಿನ ಪುಟಪುಟಗಳಲಿಪುಟಿದೇಳಲಿ
ನಿನ್ನ ಶ್ರೇಯಸ್ಸು ನಕ್ಷತ್ರಗಳೆಡೆಗೆ........
ಸಾರ್ಥಕ ಜೀವನ
ಮುಗಿಲೆತ್ತರಕ್ಕೆ ಬೆಳೆದು ನಿಂತು,
ನೆರಳಾಗುವ,
ಮರವಾದರೂ ಸರಿಯೇ ?

ಎಷ್ಟು ಈಜಿದರೂ ,
ದಣಿಯದೆ ದುಡಿಯುವ
ಮೀನಾದರೂ ಸರಿಯೇ ?

ದೂರದ ದಿಗಂತದೀ ಉರಿಯುತ,
ಜಗವನು ಬೆಳಗುವ
ರವಿಯಾದರೂ ಸರಿಯೇ?

ತಂಪನು ಹರಡುತ,
ಚೈತನ್ಯವ ಚಿಮ್ಮುವ
ಶಶಿಯಾದರೂ ಸರಿಯೇ ?

ಕಣ್ಣಿಗೆ ಕಾಣದೇ,
ಜೀವವ ತುಂಬುವ
ವಾಯುವಾದರೂ ಸರಿಯೇ ?

ಧರೆಯಲಿ ಇಂಗುವ,
ಝರಿಯಲಿ ಹರಿಯುವ
ಜಲವಾದರೂ ಸರಿಯೇ ?

ಸಾರ್ಥಕವಲ್ಲದ ,
ಗುರಿಗಳು ಇಲ್ಲದ
ಈ ಜೀವನವೇಕೆ ನಾ ಅರಿಯೇ ????
ಉಪನದಿ - ಬೆರೆತರೆ ಬೆಳೆದಾವು , ಒಡೆದರೆ ಮಡಿದಾವು
ಉಗಮವಾದವು ಎಲ್ಲೋ ದೂರದ ಗಿರಿ- ಕಂದರಗಳಲಿ,
ಬೆರೆತವು ,ಬೆಳೆದವು ಒಡನಾಡಿ,
ಹರಿದವು; ಬಳುಕುತ್ತ ಬಾಯಾರಿದ ಭೂಮಿಯಲಿ,
ದಿಕ್ಕು ಬದಲಿಸದೆ ,ಹಿಂಜರಿಯದೆ.
ಚಲಿಸಿದವು ಕಲ್ಲು-ಮುಳ್ಳಿನ ಹಾದಿಯಲಿ ,ಕಾಡು-ಮೇಡಿನ ಮಧ್ಯದಲಿ
ಹಸಿರನ್ನು ಹರಡುತ್ತ, ಚೈತನ್ಯವ ಚೆಲ್ಲುತ್ತ,
ಅಪ್ಪಿದವು ಸಾಗರವ ಸಾಧನೆಯಗೈಯುತ್ತ,
ಸಾರ್ಥಕತೆಯ ಪಡೆಯುತ್ತ....
ಅಮರ
ಇರುಳಲಿ ಮಡಿದು
ಹಗಲಲಿ ದುಡಿಯುವ
ಆ ಭಾಸ್ಕರ ಅಮರ

ಹಿಗ್ಗುತ ಕುಗ್ಗುತ
ಆಳಿದರು ಬೆಳೆಯುವ
ಆ ಚಂದಿರ ಅಮರ

ಆರ್ಭಟಿಸಿ , ಆಕ್ರನ್ದಿಸಿ
ಅವನಿಯ ಅಲಂಕರಿಸುವ
ಆ ಸಾಗರ ಅಮರ


ಸಂಸಾರದ ಸಮರಕೆ
ಅಂಜುವ ಅಳುಕುವ
ಹೇ ಮಾನವ ನೀ ನಶ್ವರ

ನೋವಿಗೆ ನರಳುತ
ನವೋತ್ಸಾಹ ಕಾಣದ
ಮನುಜ ನೀ ಸಹಜ
ಕಳೆದು ಹೋಯಿತೇಕೆ

ಬೇಸಿಗೆಯ ಉರಿ ಬಿಸಿಲಿನ ಸುಡು ಸೆಕೆಯಲ್ಲೂ
ಆ ಚೆಲುವು ವಸಂತದ ಮಾವಿನ ರುಚಿಯೊಡೆ
ಕಂಡ ಆ ನೆಮ್ಮದಿಯ ನಿನ್ನೆ , ಆ ಸಂತೂಷದ ಸವಿ ದಿನ
ಈ ದಿನಗಳ ಹವಾನಿಯಂತ್ರಿತ ಕೋಣೆಯಲಿ
ಕಳೆದು ಹೋಯಿತೇಕೆ ?

ಪ್ರೇತ ಛಾಯೆಯ ಪರೀಕ್ಷೆಯ ಹಿಂದಿನ ದಿನವೂ
ತಡಯಲಾರದೇ ನನ್ನಾವರಿಸಿದ
ಆ ನೆಮ್ಮದಿಯ ನಿದ್ದೆ , ಬಣ್ಣದ ಕನಸು
ಈ ದಿನಗಳ ಇರುಳಲಿ
ಕಳೆದು ಹೋಯಿತೇಕೆ ?

ಅಜ್ಜಿಗೆ ಪುಸಲಾಯಿಸಿ ಪಡೆದ
ಆ ತುಂಡು ಕಲ್ಲುಸಕ್ಕರೆಯ ಸಿಹಿ
ಅಪ್ಪನ ಕಿಸೆಯಲ್ಲಿ ಕೈಯಾದಿಸಿ ಕದ್ದ
ಆ ನಾಲ್ಕಾಣೆಯ ಚಾಕ್ಲೇಟಿನ ಸವಿ
ಈ ದಿನಗಳ ನನ್ನ ನಾಲಿಗೆಯ ಮೇಲೆ
ಕಳೆದು ಹೋಯಿತೇಕೆ ?

ಈ ಬಿಸಿ ಉಸಿರಿನ ಜೀವನದಲಿ
ಬೆಳೆಯುತ್ತಾ ಬೆಳೆಯುತ್ತಾ
ನನ್ನಲಿದ್ದ 'ನಾನು'
ಕಳೆದು ಹೋದನೇನು ????


ನಾನು
ಬಂಗಾರದ ಬಾಲ್ಯದಲಿ ಕನಸುಗಳ ಬವಣೆ ಕಟ್ಟಿ ,
ಯಶಸ್ಸಿನ ಹಿಂದೆ ಯೌವನ ಸವೆಸುವ
ಯೋಗಿ ನಾನಲ್ಲ ,

ಯಾಕೆಂದರೆ ಯಶಸ್ಸು ಕನಸಲ್ಲ !!!!!